
ಹಾವೇರಿ: ನಗರದ ಬಳ್ಳಾರಿ ಬಡಾವಣೆಯ ಇಜಾರಿಲಕಮಾಪುರದ ಶ್ರೀ ಗಜಾನನ ಸೇವಾ ಸಮಿತಿಯ ಭವ್ಯ ಮಂಟಪದಲ್ಲಿ ಧಾರ್ಮಿಕ ವೈಭವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿವೆ. ಮಂಗಳವಾರ (15-09-2026) ಸಂಜೆ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳ ಮನಸೂರೆಗೊಂಡವು.
ಸಂಜೆ 6:30ಕ್ಕೆ ಮೋಟೆಬೆನ್ನೂರು ಗ್ರಾಮದ ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿಯವರಿಂದ ಶ್ರದ್ಧಾ-ಭಕ್ತಿಯ ಭಜನಾ ಕಾರ್ಯಕ್ರಮ ಜರುಗಿತು. ಇದರೊಂದಿಗೆ ಚಾಮುಂಡೇಶ್ವರಿ ಮಹಿಳಾ ಸಂಘದ ವತಿಯಿಂದ ನಿತ್ಯ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು. ಸಂಘದ ಸದಸ್ಯೆಯರು ಪ್ರಸ್ತುತಪಡಿಸಿದ ಸುಮಧುರ ಭಕ್ತಿಗೀತೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದ ನೂರಾರು ಸದ್ಭಕ್ತರ ಮನಸ್ಸನ್ನು ತಣಿಸಿದವು. ನಂತರ ರಾತ್ರಿ 9:00 ಗಂಟೆಗೆ ಬಡಾವಣೆಯ ಹಿರಿಯರಾದ ಶ್ರೀ ಜಿ. ಸುರೇಶ್ ಅವರ ನೇತೃತ್ವದಲ್ಲಿ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗ ನೆರವೇರಿತು.
ದಿನನಿತ್ಯದ ಪ್ರಸಾದ ಸೇವೆ
- ಉತ್ಸವದ ಮೂರನೇ ದಿನ: ಶ್ರೀನಿವಾಸ ಇಟಗಿ ಹಾಗೂ ಸತೀಶ ಪಾಟೀಲ ಅವರಿಂದ
- ನಾಲ್ಕನೇ ದಿನ: ಎಸ್. ಕೆ. ಹಿರೇಮಠ ಅವರಿಂದ
- ಐದನೇ ದಿನ: ಶ್ರೀ ಗಜಾನನ ಸೇವಾ ಸಮಿತಿಯ ವತಿಯಿಂದ ಪ್ರಸಾದ ಸೇವೆ ಏರ್ಪಡಿಸಲಾಗಿದೆ.
ಒತ್ತಡದ ಜೀವನಕ್ಕೆ ಆಹ್ಲಾದ ತಂದ 5 ದಿನಗಳ ಹಬ್ಬ
ದೈನಂದಿನ ಜಂಜಾಟ ಹಾಗೂ ಒತ್ತಡದ ಬದುಕಿನ ನಡುವೆ ಬಡಾವಣೆಯ ಜನರಿಗೆ ಮಾನಸಿಕ ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸಮಿತಿಯು ನಿರಂತರ 5 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ನಿವಾಸಿಗಳಲ್ಲಿ ಅಪಾರ ಸಂತಸ ಮೂಡಿಸಿದೆ.
ಉಪಸ್ಥಿತರಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ಶ್ರೀ ಗಜಾನನ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಚನ್ನವೀರಗೌಡ ಅಂದಾನಿಗೌಡ್ರ, ಕಾರ್ಯದರ್ಶಿ ಶ್ರೀ ರಾಜಶೇಖರ ನೀರಲಗಿ, ಖಜಾಂಚಿ ಶ್ರೀ ಶಂಕ್ರಣ್ಣ ನಿಂಗಪ್ಪನವರ, ಬಡಾವಣೆಯ ಹಿರಿಯರಾದ ಶ್ರೀ ಚಂದ್ರಶೇಖರ ನೆಗಳೂರು, ಎಫ್. ಬಿ. ಮೆಲ್ಮುರಿ, ಶ್ರೀ ಗಂಗಣ್ಣ ಹಡಗಲಿ, ಶ್ರೀ ರಾಜಶೇಖರ ಮಾತನವರ, ಶ್ರೀ ನೀಲಪ್ಪ, ಶ್ರೀ ಜಯರಾಜ, ಹರೀಶ್ ಸೇರಿದಂತೆ ಬಡಾವಣೆಯ ನೂರಾರು ನಾಗರಿಕರು, ತಾಯಂದಿರು ಹಾಗೂ ಯುವಕರು ಉಪಸ್ಥಿತರಿದ್ದರು.





