📰 SPARDHA NEWS ಕನ್ನಡ

ಪರಂಪರೆಯ ರಕ್ಷಣೆಯಲ್ಲಿ ಯುವಜನತೆಯ ಪಾತ್ರ ಅತ್ಯಮೂಲ್ಯ

ಹಾವೇರಿಯಲ್ಲಿ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಹಾಗೂ ಪರಂಪರಾ ನಡಿಗೆ

ಹಾವೇರಿ:

ದೇಶವೊಂದರ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆ ಆ ದೇಶದ ಜೀವಾಳ. ಆದರೆ ಆಧುನಿಕತೆ ಮತ್ತು ಜಾಗತೀಕರಣದ ಪ್ರಭಾವದಿಂದ ನಮ್ಮ ಹೆಮ್ಮೆಯ ಸಾಂಸ್ಕೃತಿಕ ಆಸ್ತಿಗಳು ಮರೆಯಾಗುತ್ತಿರುವ ಆತಂಕ ಎದುರಾಗಿದೆ.

ಇಂತಹ ಸಂದರ್ಭದಲ್ಲಿ ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಾವೇರಿಯ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಮಂಜುನಾಥ ಎಂ. ಹೊಳ್ಳಿಯವರು ಅಭಿಪ್ರಾಯಪಟ್ಟರು.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ – ಹಾವೇರಿ ಉಪವಲಯ, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಹಾಗೂ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಪರಂಪರೆ ಕೂಟದ ಸಹಯೋಗದಲ್ಲಿ ಸ್ಮಾರಕಗಳ ಸಂರಕ್ಷಣೆ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಪರಂಪರಾ ನಡಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಮಂಜುನಾಥ ಎಂ. ಹೊಳ್ಳಿಯವರು, ಯುವಜನತೆ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಪರಂಪರೆಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಮಖಂಡಿಯ ಬಿ.ಎಲ್.ಡಿ.ಇ. ಸಂಸ್ಥೆಯ ವಾಣಿಜ್ಯ, ಬಿ.ಎಚ್.ಎಸ್. ಕಲೆ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣ ಕಿರೇಸೂರ, ಹಾವೇರಿ ಪುರಸಿದ್ದೇಶ್ವರ ದೇವಾಲಯದ ವಾಸ್ತುಶಿಲ್ಪ ಹಾಗೂ ಶಾಸನಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಮಾಹಿತಿ ನೀಡಿದರು.

ಹಾವೇರಿ ನಗರದ ಇತಿಹಾಸಾಸಕ್ತ ಹಾಗೂ ಜವಾರಿ ಕನ್ನಡಿಗ ಯೂಟ್ಯೂಬರ್ ಶ್ರೀ ಶಂಕರ ಮಠಪತಿ, ಇಂದಿನ ಯುವಜನತೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸದ ಕುರಿತು ಜಾಗೃತಿ ಮೂಡಿಸಬಹುದು ಎಂದು ಹೇಳಿದರು.

ರೀಲ್ಸ್, ವ್ಲಾಗ್ಸ್ ಮತ್ತು ಬ್ಲಾಗ್‌ಗಳಂತಹ ಡಿಜಿಟಲ್ ಮಾಧ್ಯಮಗಳ ಮೂಲಕ ನಮ್ಮ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪರಿಚಯಿಸುವ ಅವಕಾಶ ಯುವಜನತೆಗೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್.ಆರ್. ಕೋರಿಶೆಟ್ಟರ, ಪ್ರಾಚೀನ ಸ್ಮಾರಕಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿದ್ದು, ಆಧುನಿಕತೆಯ ಪ್ರಭಾವದಿಂದ ಅವುಗಳು ವಿನಾಶದ ಅಂಚಿನಲ್ಲಿವೆ. ಆದ್ದರಿಂದ ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಪರಂಪರೆ ಕೂಟದ ಸಂಚಾಲಕ ಡಾ. ಶರಣಪ್ಪ ಜಗ್ಗಲ ಮಾತನಾಡಿ, ಪರಂಪರೆ ಎಂದರೆ ಕೇವಲ ಗತಕಾಲದ ನೆನಪಲ್ಲ. ಅದು ನಮ್ಮ ಅಸ್ತಿತ್ವದ ಗುರುತು. ಯುವಜನತೆ ತಮ್ಮ ಬೇರುಗಳನ್ನು ಅರಿತುಕೊಂಡು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಪರಂಪರಾ ನಡಿಗೆಯಲ್ಲಿ 125ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

ವಿದ್ಯಾರ್ಥಿಗಳು ಹಾವೇರಿ ನಗರದ ಪ್ರಮುಖ ಐತಿಹಾಸಿಕ ಸ್ಮಾರಕಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಾವೇರಿ ಉಪವಲಯದ ಸಿಬ್ಬಂದಿ, ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ನಗರದ ಹಿರಿಯ ನಾಗರಿಕರು ಭಾಗವಹಿಸಿದ್ದರು.

ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ನೇತ್ರಾ ಗುಳೇದ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿನಿ ನಾಜ್ರೀನ ಭಾನು ಸೇತಸನದಿ ಪ್ರಾರ್ಥಿಸಿದರು.

ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಮಣಿಕಂಠ ಗೋದಮನಿ ವಂದಿಸಿದರು.

ನಮ್ಮ ಪರಂಪರೆ ನಮ್ಮ ಹೆಮ್ಮೆ.
ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು.

SPARDHA NEWS ಕನ್ನಡ