ಕೊಡಿಯಾಲ ಹೊಸಪೇಟೆ: ಸ್ಥಳೀಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಆಂಜನೇಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಮಹೋತ್ಸವವು ಅತ್ಯಂತ ಭಕ್ತಿ-ಭಾವ ಮತ್ತು ವಿಜೃಂಭಣೆಯಿಂದ ಜರುಗಿತು.

​ಕಾರ್ಯಕ್ರಮದ ಅಂಗವಾಗಿ ಬಲಮುರಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಕುಂಭಮೇಳ, ನಾದಸ್ವರ-ವಾದ್ಯ ಮೇಳಗಳ ಮೆರವಣಿಗೆ, ಭಜನೆ ಹಾಗೂ ಪ್ರಸಾದ ವಿನಿಯೋಗ ಭಕ್ತರ ಗಮನ ಸೆಳೆಯಿತು. ಬುಧವಾರದಂದು ಬೆಳಗ್ಗೆ ಶಾಸ್ತ್ರೋಕ್ತವಾಗಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧರ್ಮಸಭೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ತತ್ವಪದ ಕಾರ್ಯಕ್ರಮಗಳು ಜರುಗಿದವು.

​ಈ ಧಾರ್ಮಿಕ ಮಹೋತ್ಸವದ ದಿವ್ಯ ಸಾನ್ನಿಧ್ಯವನ್ನು ಕಣ್ಕುಪ್ಪೆ ಗವಿಮಠದ ಶ್ರೀ ಷ|| ಬ್ರ|| ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

​ಶ್ರೀ ಆಂಜನೇಯ ಸೇವಾ ಸಮಿತಿಯ ಅಧ್ಯಕ್ಷರಾದ ಅಣ್ಣಪ್ಪ ಪೂಜಾರ್ ಅವರ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್ ಕೋಳಿವಾಡ, ನಿಕಟಪೂರ್ವ ಶಾಸಕರಾದ ಅರುಣ್‌ಕುಮಾರ್ ಪೂಜಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಬಲಮುರಿ ಗಣೇಶ, ಕೊಡಿಯಾಲ