ಬೆಂಗಳೂರು, ಮಾರ್ಚ್ 17: ರಾಜ್ಯ ಸರ್ಕಾರವು ತಕ್ಷಣವೇ ‘ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ’ (KAOMA 2025) ಜಾರಿಗೊಳಿಸಬೇಕು ಹಾಗೂ ಅಪಾರ್ಟ್‌ಮೆಂಟ್‌ ಸಮುದಾಯಗಳ ಮೇಲೆ ಹೇರಲಾಗಿರುವ ತಾರತಮ್ಯದ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ರದ್ದುಗೊಳಿಸಬೇಕು ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡೆರೇಷನ್ (BAF) ಒತ್ತಾಯಿಸಿದೆ.

​ಇಂದು ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್‌ ಪದಾಧಿಕಾರಿಗಳು ಸರ್ಕಾರದ ವಿಳಂಬ ನೀತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಅಂಶಗಳು:

  • ಭರವಸೆ ಈಡೇರಿಸದ ಸರ್ಕಾರ: 1972ರ ಹಳೆಯ ಕಾಯ್ದೆ ಬದಲಿಗೆ ಹೊಸ ಕಾನೂನು ತರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಭರವಸೆ ಎರಡು ವರ್ಷ ಕಳೆದರೂ ಈಡೇರಿಲ್ಲ. KAOMA 2025 ಕರಡು ಸಿದ್ಧವಿದ್ದರೂ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ.
  • ಅಸಮಾನತೆಯ ಶುಲ್ಕ: 2000 ಚದರ ಅಡಿಗಿಂತ ಕಡಿಮೆ ಇರುವ ಸ್ವತಂತ್ರ ಮನೆಗಳಿಗೆ ತಿಂಗಳಿಗೆ ಕೇವಲ ₹100 ಶುಲ್ಕವಿದ್ದರೆ, ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಪ್ರತಿ ಕೆಜಿಗೆ ₹12 ಶುಲ್ಕ ವಿಧಿಸಲಾಗುತ್ತಿದೆ. ಇದು 18% GST ಸೇರಿದರೆ ತಿಂಗಳಿಗೆ ಪ್ರತಿ ಫ್ಲಾಟ್‌ಗೆ ₹360 ರಷ್ಟಾಗುತ್ತದೆ. ಇದು ಸಾಮಾನ್ಯ ಮನೆಗಳಿಗಿಂತ 600% ಹೆಚ್ಚಿನ ಹೊರೆಯಾಗಿದೆ.
  • ಬೃಹತ್ ತ್ಯಾಜ್ಯ ಉತ್ಪಾದಕರ ಪಟ್ಟಿ: 100 ಕ್ಕೂ ಹೆಚ್ಚು ಘಟಕಗಳಿರುವ ಅಪಾರ್ಟ್‌ಮೆಂಟ್‌ಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ (Bulk Waste Genarators) ಎಂದು ವರ್ಗೀಕರಿಸಿ ದಂಡ ವಿಧಿಸುತ್ತಿರುವುದು ಅನ್ಯಾಯ ಎಂದು ಬಿಎಎಫ್ ಅಧ್ಯಕ್ಷ ಸತೀಶ್ ಮಲ್ಯ ತಿಳಿಸಿದರು.

ಬಿಎಎಫ್ (BAF) ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು:

  1. KAOMA 2025 ಅಂಗೀಕಾರ: ಪ್ರಸ್ತುತ ಬಜೆಟ್ ಅಧಿವೇಶನದಲ್ಲೇ ಈ ಕಾಯ್ದೆಯನ್ನು ಅಂಗೀಕರಿಸಿ ಅಪಾರ್ಟ್‌ಮೆಂಟ್‌ ಮಾಲೀಕರ ಹಕ್ಕುಗಳನ್ನು ರಕ್ಷಿಸಬೇಕು.
  2. ಶುಲ್ಕ ಸಮಾನತೆ: ಬಿಎಸ್‌ಡಬ್ಲ್ಯೂಎಂಎಲ್ (BSWML) ಯಾವುದೇ GST ಇಲ್ಲದೆ ಸಮಾನತೆಯ ಆಧಾರದ ಮೇಲೆ ಬಳಕೆದಾರರ ಶುಲ್ಕ ಸಂಗ್ರಹಿಸಬೇಕು.
  3. ಗ್ರೀನ್ ಕ್ರೆಡಿಟ್ಸ್: ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಮಾಡುವ ಸಮುದಾಯಗಳಿಗೆ ದಂಡದ ಬದಲು ‘ಗ್ರೀನ್ ಕ್ರೆಡಿಟ್‌’ ಪ್ರೋತ್ಸಾಹ ನೀಡಬೇಕು.
  4. ಪಾರದರ್ಶಕತೆ: ಯಾವುದೇ ಬೆಲೆ ಬದಲಾವಣೆ ಮಾಡುವ ಮೊದಲು ಅಪಾರ್ಟ್‌ಮೆಂಟ್‌ ಸಂಘಗಳೊಂದಿಗೆ ಸಮಾಲೋಚನೆ ನಡೆಸಬೇಕು.

​ಪತ್ರಿಕಾಗೋಷ್ಠಿಯಲ್ಲಿ ಬಿಎಎಫ್ ಉಪಾಧ್ಯಕ್ಷ ಪ್ರದೀಪ್ ಪೈ, ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಹಾಗೂ ಆಡಳಿತ ಮಂಡಳಿ ಸದಸ್ಯ ವಿಶ್ವ ವೆಂಕಟ ರೆಡ್ಡಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ನೋಡಿ: Www.spardhanews.in

ನಿಖರ ಸುದ್ದಿ, ನೇರ ಮಾತು