
ಧೀ ಆಸ್ಪತ್ರೆಯಿಂದ ‘ಧೀ ಶಕ್ತಿ’ ಕಾರ್ಯಕ್ರಮ: ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ
ಬೆಂಗಳೂರು, ಮಾರ್ಚ್ 08: “ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶಪಡಿಸದೆ, ಪ್ರಕೃತಿಯನ್ನು ಉಳಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿಯಬೇಕು” ಎಂದು ಪರಿಸರವಾದಿ ರೇವತಿ ಕಾಮತ್ ಕರೆ ನೀಡಿದರು.

ಕನಕಪುರ ರಸ್ತೆಯ ಧೀ (DHEE) ಆಸ್ಪತ್ರೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಧೀ ಶಕ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಕಾಳಜಿ ಮರೆಯದಿರಿ
ಇಂದಿನ ದಿನಗಳಲ್ಲಿ ಜನರು ಕೇವಲ ವೈಯಕ್ತಿಕ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದು, ಪರಿಸರ ಮಾಲಿನ್ಯದ ಬಗ್ಗೆ ಅಸಡ್ಡೆ ತೋರುತ್ತಿರುವುದು ಬೇಸರದ ಸಂಗತಿ. ಬಿಲ್ಡರ್‌ಗಳು ಕೇವಲ ಕಾಂಕ್ರೀಟ್ ಕಾಡು ನಿರ್ಮಿಸುವತ್ತ ಆಲೋಚಿಸುತ್ತಿದ್ದಾರೆ. ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆಯೂ ಸರಿಯಾದ ಅರಿವಿಲ್ಲದೆ ಅನ್ಯ ದೇಶದ ಗಿಡಗಳನ್ನು ಬೆಳೆಸುತ್ತಿದ್ದೇವೆ. ರೈತರು ಕೂಡ ಮಿತಿಮೀರಿದ ಕೀಟನಾಶಕ ಬಳಕೆಯಿಂದ ಪರಿಸರ ವಿನಾಶಕ್ಕೆ ಕಾರಣವಾಗುತ್ತಿದ್ದಾರೆ, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ರೇವತಿ ಕಾಮತ್ ತಿಳಿಸಿದರು.

ಆತ್ಮವಿಶ್ವಾಸವೇ ಸ್ತ್ರೀ ಶಕ್ತಿ
ಮುಖ್ಯ ಅತಿಥಿಯಾಗಿದ್ದ ಪದ್ಮಶ್ರೀ ಪುರಸ್ಕೃತ ಅನುಪಮಾ ಹೊಸಕೆರೆ ಮಾತನಾಡಿ, “ಇತಿಹಾಸದುದ್ದಕ್ಕೂ ಮಹಿಳೆಯರ ಶಕ್ತಿ ಅಪಾರವಾಗಿದೆ. ಸಮಸ್ಯೆಗಳು ಎದುರಾದಾಗ ಧೃತಿಗೆಡದೆ ಆತ್ಮವಿಶ್ವಾಸದಿಂದ ಎದುರಿಸಬೇಕು. ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ, ನಮ್ಮ ಅಸ್ತಿತ್ವವನ್ನು ಸಮಾಜಕ್ಕೆ ಸಾರುವಂತಿರಲಿ” ಎಂದರು.

ಆರ್ಥಿಕ ಸ್ವಾತಂತ್ರ್ಯ ಅನಿವಾರ್ಯ
ಬ್ರಿಗೇಡ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ನಿರುಪಮಾ ಶಂಕರ್ ಮಾತನಾಡಿ, “ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಮದುವೆಯ ನಂತರ ಕೇವಲ ಗೃಹಿಣಿಯಾಗಿ ಉಳಿಯದೆ, ಆರ್ಥಿಕವಾಗಿ ಸಬಲರಾಗುವತ್ತ ಮಹಿಳೆಯರು ಗಮನಹರಿಸಬೇಕು” ಎಂದು ಕಿವಿಮಾತು ಹೇಳಿದರು. ವಿಬು ಅಕಾಡೆಮಿಯ ಸಂಸ್ಥಾಪಕ ಡಾ. ವಿ. ಬಿ. ಆರತಿ ಮಾತನಾಡಿ, “ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಅವರ ಕೈಯಲ್ಲೇ ಇದೆ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು” ಎಂದರು.

ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ
ಧೀ ಆಸ್ಪತ್ರೆಯ ನರರೋಗ ತಜ್ಞ ಡಾ. ಚಂದ್ರಶೇಖರ್ ಮಾತನಾಡಿ, “ನಮ್ಮ ಆಸ್ಪತ್ರೆಯಲ್ಲಿ ದಾನಿಗಳ ನೆರವಿನೊಂದಿಗೆ ಅನೇಕ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ಇದರಿಂದ ಚೇತರಿಸಿಕೊಂಡ ಹಲವರು ಇಂದು ಕ್ರೀಡಾ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ” ಎಂದು ಹೆಮ್ಮೆಯಿಂದ ತಿಳಿಸಿದರು.

ಸಾಧಕರಿಗೆ ಗೌರವ:
ಇದೇ ಸಂದರ್ಭದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸುಪ್ರಜಾ ಚಂದ್ರಶೇಖರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.







