ಹಾವೇರಿ: “ದೇಶದ ಪರಂಪರೆ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಇತಿಹಾಸದ ಮೌನ ಸಾಕ್ಷಿಗಳಾದ ಈ ಸ್ಮಾರಕಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಯುವಜನತೆಯ ಕರ್ತವ್ಯ,” ಎಂದು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ನಿರ್ದೇಶಕಿ ಡಾ. ಡಿ. ಸ್ಮಿತಾ ಹೇಳಿದರು.

​ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆದ ‘ವಿಶ್ವ ಪರಂಪರೆ ದಿನ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪರಂಪರೆ ರಕ್ಷಣೆಗೆ ಶ್ರಮದಾನ

​ಕರ್ನಾಟಕ ಸರ್ಕಾರ, ಪುರಾತತ್ವ ಇಲಾಖೆ ಹಾಗೂ ಹಾವೇರಿಯ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ (ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ) ಸಹಯೋಗದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಏಪ್ರಿಲ್ 18ರ ಉರಿಬಿಸಿಲನ್ನೂ ಲೆಕ್ಕಿಸದೆ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇವಾಲಯದ ಆವರಣದಲ್ಲಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸಿ, ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.

ಪ್ರಾತ್ಯಕ್ಷಿಕೆ ಮೂಲಕ ಇತಿಹಾಸ ದರ್ಶನ

​ಸ್ವಚ್ಛತಾ ಕಾರ್ಯದ ನಂತರ, ಇತಿಹಾಸ ತಜ್ಞರಾದ ಬೆಂಗಳೂರಿನ ಡಾ. ವಿ. ಸಂಧ್ಯಾ ಅವರು ದೇವಾಲಯದ ವಾಸ್ತುಶಿಲ್ಪ, ಶಾಸನಗಳು ಹಾಗೂ ಪಲ್ಲವ ವೀರ ನೊಳಂಬ ದೊರೆ ಉದಯಾದಿತ್ಯ ಮತ್ತು ರಾಣಿ ಮಾಲದೇವಿ ಅವರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ರಾಯಚೂರು ವಿಶ್ವವಿದ್ಯಾಲಯದ ಡಾ. ವೀರೇಶ ಡಿ. ಅವರು ಸ್ಮಾರಕಗಳ ವೈಜ್ಞಾನಿಕ ಹಿನ್ನೆಲೆಯ ಬಗ್ಗೆ ವಿವರಣೆ ನೀಡಿದರು.

ಗಣ್ಯರ ಉಪಸ್ಥಿತಿ

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶ್ರೀ ಎಂ. ಸಿ. ಕೊಳ್ಳಿ ವಹಿಸಿದ್ದರು. ಹಾವೇರಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ ಹಂಚಿನಮನಿ, ಹೇರೂರು ಪಿಡಿಒ ಹೊಳಿಯಪ್ಪ ಹೊಳಿಯಣ್ಣನವರ, ಹಾಗೂ ಗ್ರಾಮದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

​ಕೆ.ಎಲ್.ಇ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶಿವಯೋಗಿ ಆರ್. ಕೋರಿಶೆಟ್ಟರ, ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಡಾ. ಶರಣಪ್ಪ ಜಗ್ಗಲ, ಪ್ರೊ. ರೂಪಾ ಕೋರೆ ಹಾಗೂ ಸೌಭಾಗ್ಯ ಕೋಳಿವಾಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

“ಪರಂಪರೆ ನಮ್ಮ ಗುರುತು, ಅದರ ರಕ್ಷಣೆ ನಮ್ಮ ಕರ್ತವ್ಯ” ಎಂಬ ಸಂದೇಶದೊಂದಿಗೆ ಕೆ.ಎಲ್.ಇ ವಿದ್ಯಾರ್ಥಿಗಳು ನಡೆಸಿದ ಈ ಕಾಯಕವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.