
ಹಾವೇರಿ: ಉತ್ತರ ಕರ್ನಾಟಕದ ಜಾನಪದ ಸಾಹಿತ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಹೆಣ್ಣು ಮಕ್ಕಳ ವಿರುದ್ಧ ಅಶ್ಲೀಲ ಪದಬಳಕೆಯ ಹಾಡುಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲಾವಿದರ ಸಂಘದ ಅಧ್ಯಕ್ಷೆ ಶೀಲಾ ಪಾಟೀಲ್ ಸಿಂಗರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ಸ್ವಯಂ ಘೋಷಿತ ಕಲಾವಿದರು ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅಶ್ಲೀಲ ಪದಗಳ ಹಾಡುಗಳು ಮತ್ತು ಹಾಸ್ಯಗಳನ್ನು ರಚಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದು, ಮಹಿಳೆಯರಿಗೆ ಅವಮಾನ ಮತ್ತು ಮಾನಹಾನಿ ಉಂಟುಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಪ್ರಮುಖ ಒತ್ತಾಯಗಳು:
- ಸೋಮೋಟೋ ಕೇಸ್ ದಾಖಲಿಸಿ: ಅಶ್ಲೀಲ ಸಾಹಿತ್ಯ ಬಳಸುವವರ ವಿರುದ್ಧ ಪೊಲೀಸರು ತಕ್ಷಣವೇ ಸೋಮೋಟೋ ಕೇಸ್ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು.
- ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ: ಜಾತ್ರೆ ಮತ್ತು ಮಠ ಮಂದಿರಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂತಹ ವ್ಯಕ್ತಿಗಳನ್ನು ಕರೆಯಿಸಿ ರಂಜಿಸುವುದನ್ನು ನಿಲ್ಲಿಸಬೇಕು.
- ಜಾಲತಾಣಗಳಿಂದ ವಿಡಿಯೋ ತೆರವು: ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿರುವ ಅಶ್ಲೀಲ ವಿಡಿಯೋಗಳನ್ನು ತಡೆಯಲು ಸರ್ಕಾರ ಮುಂದಾಗಬೇಕು.
ವಿವಿಧ ಇಲಾಖೆಗಳಿಗೆ ಮನವಿ:
ಈ ಕುರಿತಂತೆ ಕಲಾವಿದರ ನಿಯೋಗವು ಹಾವೇರಿ ಜಿಲ್ಲಾಧಿಕಾರಿಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಂಸ್ಕೃತ ಇಲಾಖೆಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದೆ. ಅಶ್ಲೀಲ ಹಾಡುಗಳ ಹಾವಳಿಯನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆಯ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿ ಯಲ್ಲಪ್ಪ ಅಬಲಕಟ್ಟಿ, ಕಲಾವಿದ ಡಾ. ಕೆ.ಜಿ. ನಾಗರಾಜ್, ಪೃಥ್ವಿರಾಜ್ ಬೆಟಗೇರಿ, ಪ್ರಕಾಶ್ ಮೊರಬದ, ರಾಜು ಪೇಟಕರ್, ಗಿರೀಶ್ ಬಾರ್ಕಿ, ಅಮರ ಜವಳಿ, ವೀಣಾ ಕಂಠೇಶ್ವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.







