ಬೆಂಗಳೂರು: ವಾಸಯೋಗ್ಯ ಪ್ರಮಾಣ ಪತ್ರದ (OC) ಕುರಿತಾದ ಗೊಂದಲಗಳ ನಿವಾರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಮಾರ್ಚ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

​ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್ ಅವರು ಈ ಮಾಹಿತಿಯನ್ನು ನೀಡಿದರು.

ಪ್ರತಿಭಟನೆಗೆ ಪ್ರಮುಖ ಕಾರಣಗಳು:

  • ವಾಸಯೋಗ್ಯ ಪ್ರಮಾಣ ಪತ್ರ (OC) ಗೊಂದಲ: ಸುಪ್ರೀಂ ಕೋರ್ಟ್ ಆದೇಶದ ಅನ್ವಯ, 2025ರ ಏಪ್ರಿಲ್‌ನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಬೇಕೆಂದು ಸಂಘ ಆಗ್ರಹಿಸಿದೆ.
  • ಗ್ರಾಹಕರ ಹಿತರಕ್ಷಣೆ: ಬ್ಯಾಂಕ್ ಸಾಲ ಪಡೆದು ಕಟ್ಟಡ ನಿರ್ಮಿಸುತ್ತಿರುವ ಲಕ್ಷಾಂತರ ನಾಗರಿಕರಿಗೆ ಸುಪ್ರೀಂ ಕೋರ್ಟ್ ಆದೇಶದಿಂದ ತೊಂದರೆಯಾಗಲಿದ್ದು, ಈಗಾಗಲೇ ಕಾರ್ಯಾದೇಶ ಪಡೆದಿರುವ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು.
  • ವಿಶೇಷ ಕಾನೂನು ರೂಪಿಸುವಿಕೆ: ಅನುಮೋದಿತ ನಕ್ಷೆಯಿಲ್ಲದೆ ನಿರ್ಮಾಣಗೊಂಡ ಕಟ್ಟಡಗಳ ಅರ್ಜಿಗಳನ್ನು ಇತ್ಯರ್ಥಪಡಿಸಲು ಸಚಿವ ಸಂಪುಟದಲ್ಲಿ ವಿಶೇಷ ಕಾನೂನು ರೂಪಿಸಬೇಕು.
  • MSME ಸಮಸ್ಯೆ: ಎಂಎಸ್‌ಎಂಇ ಪ್ರಮಾಣ ಪತ್ರದ ಮೂಲಕ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಮಾರ್ಗಸೂಚಿ ಒದಗಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ಚಂದ್ರಬಾಬು ಒತ್ತಾಯಿಸಿದ್ದಾರೆ.

ಮಾ. 11 ರಂದು ಫ್ರೀಡಂ ಪಾರ್ಕ್ ಚಲೋ:

​ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾರ್ಚ್ 11ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯುತ್ ಗುತ್ತಿಗೆದಾರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘ ತಿಳಿಸಿದೆ.

ಪ್ರಮುಖ ಬೇಡಿಕೆ: ವಾಸಯೋಗ್ಯ ಪ್ರಮಾಣ ಪತ್ರ ಕಡ್ಡಾಯದ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಬೇಕು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ತೊಂದರೆಯನ್ನು ತಪ್ಪಿಸಬೇಕು.

ವರದಿ: ಸ್ಪರ್ಧಾ ನ್ಯೂಸ್ ಡೆಸ್ಕ್